ಪೆಷಾವರ್
ಪಾಕಿಸ್ತಾನದ ವಾಯವ್ಯ ಗಡಿ ಪ್ರಾಂತ್ಯದ ರಾಜಧಾನಿ; ಒಂದು ಜಿಲ್ಲೆ; ವಿಭಾಗ. ಪೆಷಾವರ್ ನಗರ ಪಾಕಿಸ್ತಾನದ ಅತ್ಯಂತ ಪುರಾತನ ಹಾಗೂ ಚಾರಿತ್ರಿಕ ನಗರಗಳಲ್ಲೊಂದು. ಕಾಬೂಲ್ ನದಿಯ ಉಪನದಿಗಳಲ್ಲೊಂದಾದ ಬಾರಾ ನದಿಯ ಎಡದಂಡೆಯ ಮೇಲೆ ಖೈಬರ್ ಕಣಿವೆಯ ಬಳಿ ಇದೆ. ಸಮುದ್ರ ಮಟ್ಟಕ್ಕೆ ಸುಮಾರು 319 ಮೀ. ಎತ್ತರದಲ್ಲಿರುವ ಈ ನಗರ ಕಾಬೂಲ್ ಪಟ್ಟಣಕ್ಕೆ ಪೂರ್ವ-ಆಗ್ನೇಯದಲ್ಲಿ 304 ಕಿ.ಮೀ. ಮತ್ತು ಲಾಹೋರಿನ ವಾಯವ್ಯಕ್ಕೆ 442 ಕಿ.ಮೀ. ದೂರದಲ್ಲಿದೆ. ಇಲ್ಲಿಂದ ರಾವಲ್ಪಿಂಡಿ, ಹೈದರಾಬಾದ್ (ಪಾಕಿಸ್ತಾನ) ಮತ್ತು ಕರಾಚಿಗಳಿಗೆ ಹೆದ್ದಾರಿ ಮತ್ತು ರೈಲು ಮಾರ್ಗಗಳಿವೆ. ರಾವಲ್ಪಿಂಡಿ, ಚಿತ್ರಾಲ್ ಮತ್ತು ಕಾಬೂಲ್‍ಗಳೊಂದಿಗೆ ವಿಮಾನ ಸೌಕರ್ಯವಿದೆ. ಇಲ್ಲಿಯ ದಂಡು ಪ್ರದೇಶ ಪಾಕಿಸ್ತಾನದ ಪಶ್ಚಿಮ ಗಡಿಯ ಅತ್ಯಂತ ದೊಡ್ಡ ಸೇನಾ ಮಿಲಿಟರಿ ಕೇಂದ್ರ. ಖೈಬರ್ ಕಣಿವೆಯ ಸಮೀಪದಲ್ಲಿನ ಈ ನಗರ ಆಯಕಟ್ಟಿನ ಸ್ಥಳವಾಗಿ ಪ್ರಾಮುಖ್ಯ ಪಡೆದಿದೆ. ಅನೇಕ ಶತಮಾನಗಳ ಕಾಲ ಇದು ಆಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಗಳಿಂದ ಬರುತ್ತಿದ್ದ ಕಾರವಾನ್ ಮಾರ್ಗಗಳ ಕೇಂದ್ರವಾಗಿತ್ತು. ನಗರದ ಸುತ್ತ 16 ದ್ವಾರಗಳ ಕೋಟೆ ಇದೆ. ನಗರದ ವಿಸ್ತರಣೆಗಾಗಿ ಇದರ ಕೆಲವು ಭಾಗಗಳನ್ನು ತೆಗೆದು ಹಾಕಲಾಗಿದೆ. 
ಪೆಷಾವರ್ ನಗರದ ಪ್ರಮುಖ ಕೈಗಾರಿಕೆಗಳು ಬಟ್ಟೆ ಮತ್ತು ಸಕ್ಕರೆ ಉತ್ಪಾದನೆ, ಹಣ್ಣುಗಳ ಡಬ್ಬೀಕರಣ, ಪಾದರಕ್ಷೆ ತಯಾರಿಕೆ, ಚರ್ಮಗೆಲಸ, ಮಣ್ಣಿನ ಪಾತ್ರೆಗಳ ತಯಾರಿಕೆ, ಮೇಣ ಮತ್ತು ಕಸೂತಿ ಕೆಲಸ, ತಾಮ್ರದ ಪಾತ್ರೆ, ಲುಂಗಿ, ರುಮಾಲು, ರತ್ನಗಂಬಳಿ, ಅಲಂಕಾರದ ಕೆತ್ತನೆಗಳಿಂದ ಕೂಡಿದ ಮರದ ಪೀಠೋಪಕರಣ ಮುಂತಾದವುಗಳ ತಯಾರಿಕೆ, ದಂತದ ಕೆತ್ತನೆ ಕೆಲಸ, ಬಾಕು ಮತ್ತು ಸಣ್ಣ ಆಯುಧಗಳ ತಯಾರಿಕೆ. ಇಲ್ಲಿರುವ ಪುರಾತನವಾದ ಕಿಸ್ಸ ಕಹಾನಿ ಬeóÁರ್ ವಿದೇಶೀ ವರ್ತಕರು ಸಂಧಿಸುವ ಪ್ರಮುಖ ಸ್ಥಳವಾಗಿದೆ. 

ಪೆಷಾವರ್ ನಗರದ ಉದ್ಯಾನಗಳು ಮತ್ತು ಉಪನಗರಗಳು ಕೋಟೆಯ ಹೊರಭಾಗದಲ್ಲಿವೆ. ಸಿಖ್ಖರು ದುರಾನಿಗಳನ್ನು ನೌಷೆರಾ ಕದನದಲ್ಲಿ ಸೋಲಿಸಿದ ಅನಂತರ ಅವರ ಅಧಿಕೃತ ನಿವಾಸವನ್ನು ನಾಶಪಡಿಸಿ ಅದರ ಅವಶೇಷಗಳ ಮೇಲೆ ಕಟ್ಟಿದ ಕೋಟೆ, ಹಿಂದೆ ಬೌದ್ಧ ಮಠವಾಗಿದ್ದು, ಈತ ಹಿಂದೂ ದೇವಾಲಯವಾಗಿರುವ ಗೋರ್ ಖತ್ರಿ, 1630 ರಲ್ಲಿ ಮೊಗಲ್ ವಾಸ್ತುಶಿಲ್ಪಕ್ಕೆ ಅನುಗುಣವಾಗಿ ಕಟ್ಟಿದ ಸಂಪೂರ್ಣ ಬಿಳಿಯ ಬಣ್ಣದ ಮಹಾಬತ್ ಖಾನ್ ಮಸೀದಿ, ವಿಕ್ಟೋರಿಯ ಸ್ಮಾರಕ ಭವನ, 1906 ರಲ್ಲಿ ಸ್ಥಾಪಿತವಾದ ಗಾಂಧಾರ ಮೂರ್ತಿಶಿಲ್ಪಗಳ ದೊಡ್ಡ ಸಂಗ್ರಹವಿರುವ ಮ್ಯೂಸಿಯಂ, ಸರ್ಕಾರಿ ಭವನ-ಇವು ಕೆಲವು ಪ್ರಮುಖ ಕಟ್ಟಡಗಳು. 1867 ರಲ್ಲಿ ಇಲ್ಲಿ ಪೌರಸಭೆ ಸ್ಥಾಪಿತವಾಯಿತು. 1950 ರಲ್ಲಿ ಪೆಷಾವರ್ ವಿಶ್ವವಿದ್ಯಾಲಯ ಆರಂಭವಾಯಿತು. ನಗರದ ಪೂರ್ವ ಭಾಗದಲ್ಲಿರುವ ಶಾಹ್‍ಜೀ-ಕೀ-ದೇರಿ ದಿಬ್ಬಗಳಲ್ಲಿ ಈ ಉಪಖಂಡದಲ್ಲಿಯೇ ಅತ್ಯಂತ ದೊಡ್ಡದಾದ, 2 ನೆಯ ಶತಮಾನದಲ್ಲಿ ನಿರ್ಮಿತವಾದ ಬೌದ್ಧ ಸ್ಥೂಪಗಳ ಅವಶೇಷಗಳಿವೆ. ಉ.ಅ. 3401' ಮತ್ತು ಪೂ.ರೇ. 71035' ಮೇಲೆ ಇರುವ ಈ ನಗರ ವಿಸ್ತೀರ್ಣ 77 ಚ.ಕಿ.ಮೀ ಜನಸಂಖ್ಯೆ 750,000.

ಹಿಂದೆ ಗಾಂಧಾರ ರಾಜ್ಯದ ರಾಜಧಾನಿಯಾಗಿದ್ದ ಈ ನಗರವನ್ನು ಪಾರಷವರ, ಪುರುಷಪುರ ಎಂದು ಕರೆಯಲಾಗುತ್ತಿತ್ತು. ನಗರದ ಮತ್ತೊಂದುಮ ಹೆಸರಾದ ಬೇಗ್ರಾಮ್ ಎಂಬುದರ ಉಲ್ಲೇಖವನ್ನು ಮೊಗಲ್ ಚರಿತ್ರೆಯಲ್ಲೂ ಪುಷ್ಟು ಕಾವ್ಯಗಳಲ್ಲೂ ಕಾಣಬಹುದು. ಪೆಷಾವರ್ (ಗಡಿಯಲ್ಲಿರುವ ಪಟ್ಟಣ) ಎಂಬ ಹೆಸರು ಬಂದದ್ದು ಮೊಗಲ್ ಚಕ್ರವರ್ತಿ ಅಕ್ಬರನ ಕಾಲದಲ್ಲಿ (1556-1608). ಇಲ್ಲಿಯ ಹಬಾಜ್ ಗಾರ್ಚಿ ಮತ್ತು ಮನ್ಸೆರ ಎಂಬಲ್ಲಿ ಬಂಡೆಗಳ ಮೇಲೆ ಅಶೋಕನ ಶಾಸನಗಳು ಸಿಕ್ಕಿವೆ. ಈಗಲೂ ಅಲ್ಲಿ ಅನೇಕ ಸ್ಥೂಪಗಳ ಅವಶೇಷಗಳನ್ನು ಕಾಣಬಹುದು. 

ಪ್ರಾಚೀನ ಸಂಸ್ಕøತ ಸಾಹಿತ್ಯದಲ್ಲೂ ರೋಮನ್ ಯೋಧ ಹಾಗೂ ಇತಿಹಾಸಕಾರ ಸ್ಟ್ರಾಬೋ, ಗ್ರೀಕ್ ಇತಿಹಾಸಕಾರ ಆರಿಯನ್ ಮತ್ತು ಭೂಗೋಳ ಶಾಸ್ತ್ರಜ್ಞ ಟೌಲೆಮಿ ಇವರ ಕೃತಿಗಳಲ್ಲೂ ಪೆಷಾವರ್ ನಗರದ ಪ್ರಸ್ತಾಪವಿದೆ. ಕ್ರಿ.ಪೂ. 2ನೆಯ ಶತಮಾನದಲ್ಲಿ ಇದು ಗ್ರೀಕೊ-ಬ್ಯಾಕ್ಟ್ರಿಯನ್ನರ ವಶವಾಯಿತು. ಕ್ರಿ. ಶ. 1ನೆಯ ಶತಮಾನದಲ್ಲಿ ಇದು ಪುಷಾಣರ ಅಧೀನಕ್ಕೆ ಬಂತು. ಪುರುಷಪುರವನ್ನು ಕುಷಾಣ ದೊರೆ ಕನಿಷ್ಕ ತನ್ನ ರಾಜಧಾನಿಯಾಗಿ ಮಾಡಿಕೊಂಡ. ಚೀನಿ ಯಾತ್ರಿಕ ಫಾಹಿಯಾನ್ 5ನೆಯ ಶತಮಾನದಲ್ಲಿ ಈ ಪ್ರದೇಶದಲ್ಲಿ ಪ್ರವಾಸ ಮಾಡಿದಾಗ ಇಲ್ಲಿ ಬೌದ್ಧ ಮತ ಉಚ್ಚ್ರಾಯ ಸ್ಥಿತಿಯಲ್ಲಿತ್ತು. ಕುಷಾಣರನ್ನು ಬಿಳಿಯ ಹೂಣರು ಇಲ್ಲಿಂದ ಓಡಿಸಿದರು. 988ರಲ್ಲಿ ಇದು ಮುಸ್ಲಿಮರ ವಶವಾಯಿತು. 16ನೆಯ ಶತಮಾನದಲ್ಲಿ ಆಫ್ಘಾನಿಸ್ತಾನದ ಪಠಾಣ ಬುಡಕಟ್ಟಿನವರು ಇದನ್ನು ಆಕ್ರಮಿಸಿದರು. ಮೊಗಲರಿಗೆ ಇವರು ಹೆಸರಿಗೆ ಮಾತ್ರ ಸಾಮಂತರಾಗಿದ್ದರು. ಅಹಮದ್ ಶಾ ದುರಾನಿಯಿಂದ ಸ್ಥಾಪಿತವಾದ ಆಫ್ಘನ್ ರಾಜವಂಶಕ್ಕೆ ಪೆಷಾವರ್ ನಗರ ಪ್ರಿಯವಾದ ವಾಸ ಸ್ಥಾನವಾಗಿತ್ತು. 1834ರಲ್ಲಿ ಇದರ ಮೇಲೆ ಸಿಖ್ ಒಡೆತನ ಸ್ಥಾಪಿತವಾಯಿತು. 1849ರಿಂದ 1947ರ ವರೆಗೆ ಇದು ಬ್ರಿಟಿಷ್ ಆಡಳಿತಕ್ಕೊಳಪಟ್ಟಿತ್ತು. 1901ರಲ್ಲಿ ಇದು ವಾಯವ್ಯ ಗಡಿ ಪ್ರಾಂತ್ಯದ ಭಾಗವಾಯಿತು. 

ಪೆಷಾವರ್ ಜಿಲ್ಲೆ ಉ.ಆ. 33041'-34032' ಮತ್ತು ಪೂ.ರೇ. 71022'-72045' ನಡುವೆ ಇದೆ. ವಿಸ್ತೀರ್ಣ 4,214 ಚ.ಕಿ.ಮೀ. ಈ ಜಿಲ್ಲೆ ಕಾಬೂಲ್ ನದಿಯ ಜಲಾನಯನ ಭೂಮಿಯ ಭಾಗ. ಇದು ನೀರಾವರಿ ಸೌಕರ್ಯದಿಂದ ಕೂಡಿದ ಬಯಲು ನೆಲ. ಇಲ್ಲಿಯ ಮುಖ್ಯ ಬೆಳೆಗಳು ಗೋಧಿ, ಮೆಕ್ಕೆ ಜೋಳ, ಕಬ್ಬು, ಹತ್ತಿ ಮತ್ತು ಹಣ್ಣು. ಇಲ್ಲಿಯ ನಿವಾಸಿಗಳಲ್ಲಿ ಹೆಚ್ಚಿನವರು ಪಠಾಣರು. 

ಪೆಷಾವರ್ ವಿಭಾಗದ ವಿಸ್ತೀರ್ಣ 38,322 ಚ.ಕಿ.ಮೀ. 1960ರ ಡಿಸೆಂಬರ್ 6ರಂದು ಸಂಘಟಿತವಾದ ಈ ವಿಭಾಗಕ್ಕೆ ಮಾರ್ಧನ್, ಹeóÁರ ಕೋ ಹಾತ್ ಮತ್ತು ಪೆಷಾವರ್ ಜಿಲ್ಲಗಳು ಇವಕ್ಕೆ ಸೇರಿಸಲಾಗಿರುವ ಮಾಲಕಂದ್, ಮೊಹಮಂದ್, ಖೈಬರ್ ಮತ್ತು ಕುರ್ರಮ್ ಏಜೆನ್ಸಿಗಳೂ ಸೇರಿವೆ. ಪೆಷಾವರ್ ಮತ್ತು ಮಾರ್ಧನ್ ಜಿಲ್ಲೆಗಳ ಬಹುಭಾಗ ಖೈಬರ್ ಕಣಿವೆಯ ಉತ್ತರಕ್ಕೆ ಕಾಬೂಲ್ ನದಿಯ ಜಲಾನಯನ ಭೂಮಿಗೆ ಸೇರಿದೆ. ಪೆಷಾವರ್ ಕಣಿವೆಯ ಹೆಚ್ಚಿನ ಪ್ರದೇಶ ಕಂಕರೆ ಮತ್ತು ಮೆಕ್ಕಲು ಮಣ್ಣಿನಿಂದ ಕೂಡಿದೆ. ಈಶಾನ್ಯದಲ್ಲಿ ಗುಡ್ಡಗಾಡಿನಿಂದ ಕೂಡಿದ ಹeóÁರ ಜಿಲ್ಲೆಯಲ್ಲಿ ಕುನಾಹಿರ್ ನದಿಯ ಜಲೋತ್ಸಾರಣ ಪ್ರದೇಶವಿದೆ. ಇಲ್ಲಿಯ ಕಫೆನ್ ಕಣಿವೆ ಜನಪ್ರಿಯ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಕಾಬೂಲ್ ನದಿಯ ಉತ್ತರಕ್ಕಿರುವ ಮಾಲಕಂದ್ ಮತ್ತು ಮೊಹಮಂದ್ ಏಜೆನ್ಸಿಗಳೂ ಹಾಗೂ ಖೈಬರ್ ಮತ್ತು ಕುರ್ರಮ್ ಏಜೆನ್ಸಿಗಳೂ ದಕ್ಷಿಣಕ್ಕಿರುವ ಕೋಹಾತ್ ಜಿಲ್ಲೆಯೂ ಬೆಟ್ಟ ಗುಡ್ಡಗಳಿಂದಲೂ ಸಣ್ಣ ಕಣಿವೆಗಳಿಂದಲೂ ಕೂಡಿವೆ. ಜೋಳ, ಬಾರ್ಲಿ, ಮೆಕ್ಕೆಜೋಳ, ಬಾಜ್ರ, ಕಬ್ಬು ಮತ್ತು ಹೊಗೆಸೊಪ್ಪು ಇಲ್ಲಿಯ ಮುಖ್ಯ ಬೆಳೆಗಳು. ಮಾಲಕಂದ್ ಮತ್ತು ದಾರ್ಗಾಯ್‍ಗಳಲ್ಲಿ ವಿದ್ಯುದುತ್ಪಾದನ ಕೇಂದ್ರಗಳಿವೆ.		(ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ